ಕಯ್ಯಲಿ ಚಕಮಕಿಸುತಿಹ ಚಾಕು - ಆಗಿಹುದು ಹರಿತ |
ಮನದಲಿ ಬಡಬಡಿಸುತಿಹ ಇಚ್ಛೆ - ಭರವಾದ ಇರಿತ ||
ಈ ಪರಿಯ ಕ್ರೌರ್ಯವ ಎಸಗುವುದು - ನನ್ನ ಇಂಗಿತ |
ಸಂಚಿನ ಅರಿವಿಲ್ಲದೆ ನೀ ಮಲಗಿರುವೆ - ಚಿಂತಾ-ರಹಿತ ||
ಒಂದು ಕಯ್ಯಲಿ ಹಿಡಿದೆನು ನಿನ್ನ ಶರೀರವ |
ತಡೆಯಲಾರದೆ ಹೋದೆನು ಮನದ ಉದ್ವೇಗವ ||
ತ್ವರಿತದಲಿ ಇರಿದೆನು ನಿನ್ನ ಕೋಮಲ ಹೊಟ್ಟೆಯನು |
ಚಿಮ್ಮಿತು ನಿನ್ನ ನೆತ್ತರು; ನಡುಗಿಸಿತು ನನ್ನ ಕೈಗಳನು ||
ಜೀವದ್ರವವು ಹರಿಯುವುದ ನೋಡಿ ಅದೇಕೋ ಅರಿಯೆ |
ಚಿತ್ತದಿ ಹೊರಹೊಮ್ಮಿತು ಯೋಚನೆ - ನಾ ಮಾಡಿದ್ದು ಸರಿಯೆ? ||
ತಡೆಯಲಾರದೆ ಮನದ ದುಗುಡದ ನಿರ್ಭರ |
ಹರಿಯಿತು ಕಣ್ಣೀರ ಧಾರೆಯ ಮಹಾಪೂರ ||
ಕಂಬನಿ ಇಟ್ಟರೂ, ಇದರಿಂದ ತಗುಲಿತೇ ನನಗೆ ಪಾಪ |
ಅಥವಾ ಮಾಡಿಹ ಕೃತ್ಯಕ್ಕೆ ಇದೇ ದೇವರಿಟ್ಟ ಶಾಪ? ||
ಪಶ್ಚಾತ್ತಾಪದಿ ಕ್ಷಮೆ ಯಾಚಿಸುವೆ - ನನ್ನೀ ನೀರಸ ಸ್ಥಿತಿಯಲ್ಲಿ |
ಹೇ ಸ್ವಾದ-ಭೋಗದ ರಾಣಿ - ನನ್ನ ಮೆಚ್ಚಿನ ಈರುಳ್ಳಿ....... ||
ಈರುಳ್ಳಿ ಹೆಚ್ಚುವಾಗ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ, ನನಗೆ ಬರೆದು ತಿಳಿಸಿ....... :)