Sunday, December 20, 2009

ಪೊದೆ



ಜೀವನದ ಬಿರುಗಾಳಿಯಲಿ; ಸಿಲುಕಿರಲು ಕೆಲವೊಮ್ಮೆ |
ಓಡುವೆನು ಕಾಲ್ದಾರಿಯಲಿ; ಎಡವಿರಲು ಇನ್ನೊಮ್ಮೆ |
ಅಪ್ಪುವೆನು ನಾ ಎನ್ನನೇ; ರಕ್ಷಿಸಲು ಮತ್ತೊಮ್ಮೆ ||

ನಾಜೂಕು - ಎನ್ನ ಮನವು; ಕ್ಷೇಮಜಾಗವ ಅರಸಿಹೆನು |
ಆಗುಂತಕ - ನನ್ನ ಮನೆಯು; ಮನದುಗುಡದಿ ಅಡಗಿಹೆನು |
ಆತ್ಮನಂಬಿಕೆ - ಒಂದು ಪೊದೆಯು; ಸದ್ಆಶ್ರಯವ ಬಯಸಿಹೆನು ||

ಅನುಭವದಿಂ ತುಂಬಿವೆ; ಪೊದೆಯಲ್ಲಿಹ ಎಲೆಗಳು |
ಶ್ರೀಗಂಧವ ಬೀರುತಿವೆ; ಆತ್ಮಸ್ಥೈರ್ಯದ ಹೂಗಳು |
ಸನ್ಮಾರ್ಗವ ತೋರುತಿಹೆ; ಸಂಸ್ಕೃತಿಯ ಕಾಂಡಗಳು ||

ಬಳ್ಳಿಯನು ಕಟ್ಟಿದ್ದೆನು; ಬೆಳವಣಿಗೆಯ ನಿಲ್ಲಿಸಲು |
ಕಾಂಡಗಳ ಮುರಿದಿದ್ದೆನು; ಅದರ ಹುಟ್ಟಡಗಿಸಲು |
ಬೇರ ಕೀಳಲು ಮರೆತಿದ್ದೆನು; ಅದೇ ನನ್ನ ಚಿಗುರಿಸಲು ||

ಬಿರುಗಾಳಿಯ ಆರ್ಭಟಕೆ; ಎಲ್ಲವೂ ಸಮಗೊಳ್ಳಲು |
ಕಾಪಾಡಿಹುದು ಪೊದೆಯು; ಶರಣಾಗಿ ನಾ ಬರಲು |
ಬೀರಿಹುದು ಜ್ಞಾನ-ತಳಿರು; ಹೊಸ ತೋರಣವ ಕಟ್ಟಿರಲು ||

Saturday, December 12, 2009

ನಾಂದಿ



ಶಶಿಯಿಲ್ಲದ ಆಗಸದಿ
ಕಾರ್ಮೋಡವು ಒಗ್ಗೂಡಲು |
ಬಿರುಗಾಳಿಯ ಆರ್ಭಟದಿ
ಬಹುತೆರೆಗಳು ಮೇಲೇರಲು |
ಅಪ್ಪಳಿಸಿತು ಉದ್ರೇಕದಿ
ಅವಳ ನೋವ ಅಲೆಗಳು ||


ಅರಸಿಹಳೊ೦ದು ಆಶ್ರಯ
ದೂರದಡದಿ ಕುಳಿತಿರಲು |
ಜೀವನದ ಅನಿಶ್ಚಯ
ಮನಸೆಲ್ಲವ ಕಾಡಿರಲು |
ಭಾವನೆಗಳ ಅಭಿನಯ
ತನ್ನಾತ್ಮವ ಕೊಂದಿರಲು ||


ಆಶಾಛವಿಯ ಕಿರಣಗಳು
ತಾಮಸವ ಕಳೆದಿರಲು |
ಭರವಸೆಯ ತಂಗಾಳಿಯು
ನೆಮ್ಮದಿಯ ತಂದಿರಲು |
ಹಳೆ ದುಃಖವ ಮರೆತಿಹಳು
ಸಬಲೆಯಾಗಿ ನಗುತಿರಲು ||

Thursday, December 10, 2009

Question

The problem is known;
known is the solution.
Why is it that I frown,
to battle the situation?

Shy away from thee;
would sure yield salvation.
Should I risk to see,
the play with emotion?

To see one evolve;
is the supreme ambition.
Should I just dissolve,
in the expanse of the creation?

Monday, December 7, 2009

ಕಲ್ಮಶ

ಕಲ್ಮಶದೊಳ್ ಹುಟ್ಟಿದರೂ ಕಮಲ
ಹೊಂದಿಪುದು ಶುಭ್ರತೆಯ ಅಮಲ...
ನಿನ್ನಲ್ಲಿಯ ಕಳಂಕಗಳ ತಳಮಳ
ಸೃಜಿಸುವುದು ಪ್ರೀತಿ-ವಿಶ್ವಾಸದ ಯಮಳ...

Wednesday, December 2, 2009

ಸ್ಫೂರ್ತಿ---ಕಾಣಿಕೆ

ನಾನಾಗಿದ್ದೆ ದುರ್ಬಲ ಚೀತ್ಕಾರ
ಧ್ವನಿಯಾಗಿ ಮಾರ್ಪಡಿಸಿದುದು ನೀನೆ....
ನನ್ನಿಂದಲೇ ಆಗಿದ್ದೆ ನಾ ದೂರ
ಆತ್ಮಸಂದರ್ಶನ ಮಾಡಿಸಿದುದು ನೀನೆ....
ಬಡವನಿಗೆ ಸಿಕ್ಕಿಹುದು ರಾಜಸತ್ಕಾರ
ಅಮೂಲ್ಯರತ್ನವ ಒದಗಿಸಿದುದು ನೀನೆ....