Saturday, January 16, 2010

ಗೊಧೂಳಿಯ ವೇಳೆ --- ಶ್ರಮಣನಿಗೋ-ವೈದಿಕನಿಗೋ?



ಬಾನಂಚಲಿ ಸಾಗಿಹನು ಕೆಂಪು ರವಿ-ತೇಜ |
ಸುಂದರ ಚಿತ್ತಾರವದು ಬಣ್ಣದಾ ಕ್ಷಿತಿಜ ||
ಹಕ್ಕಿಗಳು ವಲಸೆಯಲಿ ಅರಸುತಿಹವು ಉಟಜ |
ಮುಸ್ಸಂಜೆಯ ರಂಗಲ್ಲಿ ಪರಿಸರದ ಧ್ವಜ ||

ಈ ಮಧುರ ದೃಶ್ಯವು ತೋರಿಹುದು ಕ್ಷಣಿಕ |
ಬೆಳಗುತಿದ್ದ ಆಗಸಕೆ ಬಿದ್ದಿದೇ ಯವನಿಕ ||
ಸೌಂದರ್ಯದ ಮಾಯೆಯ ಸೃಷ್ಟಿಸಿ ತನ್ಮೂಲಕ |
ಸೆಳೆದಿಹನು ಚೈತನ್ಯವ ದಿವಾಕರನು ಆವಕ ||

ಮಾಸುತಿಹ ಪರಿಧಿಯಲಿ ಮಂಕಾಗಿದೆ ಕಾಂತಿ |
ಝೇಂಕರಿಸಿಹ ದುಂಬಿಯಲಿ ಕುದುರುತಿದೆ ಕ್ಲಾಂತಿ ||
ಆಯತದ ಛಾಯೆಯಲಿ ಮೂಡುತಿದೆ ಸಂಭ್ರಾಂತಿ |
ತಾಮಸದ ಮುಸುಕಿನಲಿ ಅಳಿದಿದೆ ಮನಶಾಂತಿ ||

ಮೂಡುವನು ಆಗಸದಿ ಹುಣ್ಣಿಮೆಯ ಚಂದಿರ |
ಕತ್ತಲಿನ ಸಾಗರದಿ ಬೆಳದಿಂಗಳ ಭೂಶಿರ ||
ದುಗುಡದ ಚೀತ್ಕಾರದಿ ಶಮನದ ಉದ್ಗಾರ |
ಶಾಂತಿಯಲಿ ಮಲಗಲಿದೆ ಮನಸಿನಾ ಸರೋವರ ||

ಶಶಿಯ ಆಗಮನವು ನೆಮ್ಮದಿಯ ತರಲಿರಲು |
ಸೂರ್ಯನ ಅಗಲಿಕೆಗೆ ಚಿಂತೆಯೇತಕೆ?
ಯಶಸ್ಸಿನ ಹಾದಿಯು ಜೀವನದ ಮುಂದಿರಲು |
ಅಪಜಯದ ಚಿಹ್ನೆಗೆ ಅಳುಕಲೇತಕೆ?

Photo: Courtesy Indira