ಜೀವನದ ಬಿರುಗಾಳಿಯಲಿ; ಸಿಲುಕಿರಲು ಕೆಲವೊಮ್ಮೆ |
ಓಡುವೆನು ಕಾಲ್ದಾರಿಯಲಿ; ಎಡವಿರಲು ಇನ್ನೊಮ್ಮೆ |
ಅಪ್ಪುವೆನು ನಾ ಎನ್ನನೇ; ರಕ್ಷಿಸಲು ಮತ್ತೊಮ್ಮೆ ||
ನಾಜೂಕು - ಎನ್ನ ಮನವು; ಕ್ಷೇಮಜಾಗವ ಅರಸಿಹೆನು |
ಆಗುಂತಕ - ನನ್ನ ಮನೆಯು; ಮನದುಗುಡದಿ ಅಡಗಿಹೆನು |
ಆತ್ಮನಂಬಿಕೆ - ಒಂದು ಪೊದೆಯು; ಸದ್ಆಶ್ರಯವ ಬಯಸಿಹೆನು ||
ಅನುಭವದಿಂ ತುಂಬಿವೆ; ಪೊದೆಯಲ್ಲಿಹ ಎಲೆಗಳು |
ಶ್ರೀಗಂಧವ ಬೀರುತಿವೆ; ಆತ್ಮಸ್ಥೈರ್ಯದ ಹೂಗಳು |
ಸನ್ಮಾರ್ಗವ ತೋರುತಿಹೆ; ಸಂಸ್ಕೃತಿಯ ಕಾಂಡಗಳು ||
ಬಳ್ಳಿಯನು ಕಟ್ಟಿದ್ದೆನು; ಬೆಳವಣಿಗೆಯ ನಿಲ್ಲಿಸಲು |
ಕಾಂಡಗಳ ಮುರಿದಿದ್ದೆನು; ಅದರ ಹುಟ್ಟಡಗಿಸಲು |
ಬೇರ ಕೀಳಲು ಮರೆತಿದ್ದೆನು; ಅದೇ ನನ್ನ ಚಿಗುರಿಸಲು ||
ಬಿರುಗಾಳಿಯ ಆರ್ಭಟಕೆ; ಎಲ್ಲವೂ ಸಮಗೊಳ್ಳಲು |
ಕಾಪಾಡಿಹುದು ಪೊದೆಯು; ಶರಣಾಗಿ ನಾ ಬರಲು |
ಬೀರಿಹುದು ಜ್ಞಾನ-ತಳಿರು; ಹೊಸ ತೋರಣವ ಕಟ್ಟಿರಲು ||
1 comment:
good blog and work
Post a Comment