Friday, November 20, 2009

ನಿಯಮಾವಳಿ

ಸುಂದರ ಪುಷ್ಪವ ಅರಸುತ,
ಜೇನಿನ ಸ್ವಾದವ ನೆನೆಯುತ,
ಮಣ್ಣಿನ ಕಂಪನು ಸವಿಯುತ,
ದುಂಬಿಯು ಹಾರಿತು ಕಾಡಿನಲಿ

ಜಾವದ ಮಂಜಿಗೆ ನಡುಗುತ,
ತಣ್ಣನೆ ಗಾಳಿಗೆ ಬಳುಕುತ,
ಸೂರ್ಯನ ರಷ್ಮಿಗೆ ಒಲಿಯುತ,
ಲತೆಯು ಅರಳಿತು ತೋಟದಲಿ

ಹಸಿದಿಹ ದುಂಬಿಯು ಬಂದಾಗ,
ಹೂವಿನ ಕಾಂತಿಯ ಕಂಡಾಗ,
ಮನಸಲಿ ಕಾತರ ನಲಿದಾಗ,
ಸುಮವನು ಅಪ್ಪಿತು ಮೋಡಿಯಲಿ.

ಕುಸುಮದಿ ತುಟಿಯನು ಇರಿಸುತ,
ವೇಗದಿ ರೆಕ್ಕೆಯ ಬಡಿಸುತ,
ಪ್ರೀತಿಯ ಚುಂಬನ ನೀಡುತ,
ಮಧುವನು ಸವಿಯಿತು ಹಿಗ್ಗುತಲಿ.

ಹೊಟ್ಟೆಯು ತುಂಬಿದ ನಂತರ,
ಬೆಳೆಯಿತದೇಕೋ ಅಂತರ,
ಆಯಿತೇ ಪ್ರೀತಿಯು ನಶ್ವರ?
ನುಡಿಯಿತು ಕುಸುಮವು ದುಃಖದಲಿ.

ಪ್ರಕೃತಿ ನಿಯಮದ ಅನುಸಾರ,
ನಡೆಯುತಿಹುದೀ ಸಂಸಾರ,
ಸರಿ-ತಪ್ಪು ನಡುವಿನ ಅಂತರ,
ಅರಿತವನೆ ಜ್ಞಾನಿ - ನೀ ಕಲಿ.

1 comment:

Unknown said...

kone paragraph thumbha meaningful ide, good one.