Friday, November 27, 2009

ಪ್ರೀತಿಯ ದೋಣಿ


ದೋಣಿಯೊಂದ ನಾ ನಿರ್ಮಿಸುವೆ
ಸ್ತರಿಸಿ ಪ್ರೀತಿಯ ಹಾಳೆಯನು....
ತಾರೆಗಳಿಂದ ಆದ ಸಜ್ಜಿಸುವೆ
ಬಣ್ಣ-ಕಾಗದದ ದೋಣಿಯನು....

ನಿಶೆ-ಹಗಲು ಬಳಿ ನಿಂತಿರುವೆ
ಕನಸಿನಿಂದ ನೀ ಹೊರಬರಲು....
ದಿನಾಂತ ಸಮಯಕೆ ಕಾದಿರುವೆ
ಕಲ್ಪನೆಯ ತಾರೆ ಹೊಳೆದಿರಲು....

ಹಾಳೆಯ ನಾವಿಯ ತೇಲಿ ಬಿಡೋಣ
ಸಾಗಲಿ ಅರಸುತ ತೀರವನು....
ಪ್ರೇಮ ತರಂಗವ ಸೃಜಿಸೋಣ
ತಲುಪಲಿ ನಮ್ಮಯ ನಿಲಯವನು....


This poem was inspired by this post. Thanks Indira... :)

Sunday, November 22, 2009

ಜೀವನದ ತತ್ವ -- ಸತ್ವ?

ಎಲ್ಲರ ನೋವ ನಾ ಹಂಚಿಕೊಂಡೆ
ನನ್ನ ಆರೂ ಕೇಳುವರಿಲ್ಲ |
ಆದರೂ ಎಲ್ಲರ ನಾ ಪ್ರೀತಿಸುವೆ
ಎನಗಿಂತ ಮೂಢನು ಇನ್ನಿಲ್ಲ ||

ಪರರ ವರ್ತನೆಗೆ ದುಖಿಯಾಗದಿರು ಮನವೆ
ನಿನ್ನ ಕೆಲಸವ ನೀ ಮಾಡು ||
ನಿರಾಸೆ ಎಂಬುದು ಜೀವನದಲಿ ಸಹಜವೇ
ನಿಶ್ಕಾಮದ ದೃಶ್ಯವ ನೀ ನೋಡು ||
ಕಾಣುವುದು ಸಂಸಾರದಲಿ ಆನಂದದ ಸಾಗರವೇ
ನಿರೀಕ್ಷೆಯ ತೊರೆವ ವರವ ನೀ ಬೇಡು ||

ನಿನ್ನ ಗುಣ-ಲಕ್ಷಣಗಳನು
ಕಾಪಾಡಿಕೊ ಋತು-ಕಾಲಗಳಿ೦ದ |
ಮತ್ತೆ ಸವಿಯಲಾಗುವುದಿಲ್ಲ ಕಂಪು
ಬಾಡಿ ಹೋದ ಹೂವಿನಿಂದ ||

Saturday, November 21, 2009

ಮಾತು

ಹೇಳಬೇಕೆನೆಸುತಿದೆ ಸಾವಿರ ಮಾತು...
ನಿನ್ನ ನೋಡುತಲೆ ಆಗುತಿದೆ ಅವು ನಶ್ವರ ಧಾತು..
ನಂಬಿದ್ದೆ ನಾನು ನಿನ್ನ ಕಳೆದುಕೊಂಡೆನೆಂದು....
ಸಂತಸದಿ ನಲಿದೆನು ನೀನು ಅರ್ಥೈಸಿಕೊಂಡೆ ಎಂದು...
ಮುಂದೆ ನೀನಾಡಿದ ಮಾತುಗಳು...
ಕೊಲ್ಲುವುವು ಇನ್ನು ಹಗಲು ಇರುಳು...

Friday, November 20, 2009

ನಿಯಮಾವಳಿ

ಸುಂದರ ಪುಷ್ಪವ ಅರಸುತ,
ಜೇನಿನ ಸ್ವಾದವ ನೆನೆಯುತ,
ಮಣ್ಣಿನ ಕಂಪನು ಸವಿಯುತ,
ದುಂಬಿಯು ಹಾರಿತು ಕಾಡಿನಲಿ

ಜಾವದ ಮಂಜಿಗೆ ನಡುಗುತ,
ತಣ್ಣನೆ ಗಾಳಿಗೆ ಬಳುಕುತ,
ಸೂರ್ಯನ ರಷ್ಮಿಗೆ ಒಲಿಯುತ,
ಲತೆಯು ಅರಳಿತು ತೋಟದಲಿ

ಹಸಿದಿಹ ದುಂಬಿಯು ಬಂದಾಗ,
ಹೂವಿನ ಕಾಂತಿಯ ಕಂಡಾಗ,
ಮನಸಲಿ ಕಾತರ ನಲಿದಾಗ,
ಸುಮವನು ಅಪ್ಪಿತು ಮೋಡಿಯಲಿ.

ಕುಸುಮದಿ ತುಟಿಯನು ಇರಿಸುತ,
ವೇಗದಿ ರೆಕ್ಕೆಯ ಬಡಿಸುತ,
ಪ್ರೀತಿಯ ಚುಂಬನ ನೀಡುತ,
ಮಧುವನು ಸವಿಯಿತು ಹಿಗ್ಗುತಲಿ.

ಹೊಟ್ಟೆಯು ತುಂಬಿದ ನಂತರ,
ಬೆಳೆಯಿತದೇಕೋ ಅಂತರ,
ಆಯಿತೇ ಪ್ರೀತಿಯು ನಶ್ವರ?
ನುಡಿಯಿತು ಕುಸುಮವು ದುಃಖದಲಿ.

ಪ್ರಕೃತಿ ನಿಯಮದ ಅನುಸಾರ,
ನಡೆಯುತಿಹುದೀ ಸಂಸಾರ,
ಸರಿ-ತಪ್ಪು ನಡುವಿನ ಅಂತರ,
ಅರಿತವನೆ ಜ್ಞಾನಿ - ನೀ ಕಲಿ.

Tuesday, November 10, 2009

rangu-kaavya

ಸಂಜೆಯ ರಾಗಕೆ ಪ್ರೀತಿಯ ಭಾವಕೆ
ಹಕ್ಕಿಯ ತಾಳಕೆ ಬಾನು ರಂಗೇರಿದೆ ||

ಹೂವಿನ ಗಂಧಕೆ ದುಂಬಿಯ ಮುತ್ತಿಗೆ
ಬಳ್ಳಿಯ ತೆಕ್ಕೆಗೆ ಗದ್ದೆ ಸೊಂಪಾಗಿದೆ ||

ಮೇಘದ ಚಿತ್ತಕೆ ನೀರಿನ ಕಾಯಕೆ
ಗಾಳಿಯ ಸ್ಪರ್ಶಕೆ ಜೀವ ಒಂದಾಗಿದೆ ||