Tuesday, April 13, 2010

ಸೋಪಾನಮಾರ್ಗ



ಬಾಳ ವಿಕೀರ್ಣ ಸೋಪಾನವ
ಎಡವಿ ಮೇಲೇರುವ ಸಮಯದಲಿ |
ದಿಟ್ಟಿಸಿದೆನು ಅಡಿಪಾಯವ
ಸುಪ್ತ ಸಮಾಜದ ಪರಿಧಿಯಲಿ ||

ಕಂಡೆನು ನೋವ ಗುರುತುಗಳ
ಹಲವರು ತೆವಳಿಹ ಪಥಗಳಲಿ |
ತಿಳಿದೂ ಎನ್ನಯ ತಾಮಸವ
ನಡೆದೆನು ಗೊಡ್ಡು ದಾರಿಯಲಿ ||

ಹತ್ತುತಿರಲು ಒಂದು ದಿನ
ಆಲಿಸಿ ದನಿ ಪಿಸು-ಮಾತಿನಲಿ |
ದೃಷ್ಟಿಸಿದೆ ನಾನಾಗಸವ
ಮಿಡಿದ ಕಂಬನಿಯ ಒರಸುತಲಿ ||

ಅಚಲ ಗಗನದ ವೈಶಾಲ್ಯವ 
ಕಂಡು ನಾ ಬೆರಗಾದೆನು |
ಪ್ರತ್ಯೇಕ ಮಾನವನ ದುಃಖದ
ನಿಕೃಷ್ಟತನವ ಅರಿತೆನು ||

ಜೀವನದ ಸೋಪಾನದಲಿ
ಪಯಣವೇ ಪ್ರಾಮುಖ್ಯ |
ಇಡುವ ಪ್ರತಿ ಹೆಜ್ಜೆ ನನ್ನದೇ
ಎನ್ನ ಭವಿಷ್ಯ ಆಲೇಖ್ಯ ||